ಗುರುಪದಹಾರ – Gurupadahara

ಧರೆಯೋದ್ಧಾರಕೆ ಮೆರವರು ಗುರುಗಳು ವರಮಂತ್ರಾಲಯದಲ್ಲಿ
ವರಪ್ರಹ್ಲಾದರು ವ್ಯಾಸ ಪ್ರಭುಗಳು ವರ ತುಂಗಾ ತಟದಲ್ಲಿ

ಕೊರದಿಹ ಕಂಬದಿ ಹರಿಯನು ತೋರಿಸಿ ಹರಿನಾಮವ ಜಗದಲ್ಲಿ
ಮೆರಸಿದ ವರಪ್ರಹ್ಲಾದರು ಮೆರವರು ವರಮಂತ್ರಾಲಯದಲ್ಲಿ
ಹರಿಮತ ಸಾರವ ಹರಿಪದ ಹಾರವ ಪರಿ ಪರಿ ವಿಧಪದ ದಲ್ಲಿ
ಇಳೆಯೊಳು ಸಾರಿದ ವ್ಯಾಸರು ಮೆರೆವರು ವರಮಂತ್ರಾಲಯದಲ್ಲಿ || 1 ||

ಧರೆಯನು ಮುಸುಕಿದ ತಮವನು ತೆರಯಲು ಹರುಷದಿ ಕಲಿಯುಗದಲ್ಲಿ
ಗುರು ರಾಘವೇಂದ್ರರು ಕರುಮೆರೆದಿಹರು ವರಮಂತ್ರಾಲಯದಲ್ಲಿ
ತನುಮನಧನಗಳ ಕೊನೆಗಾಣದೆ ಭವ ವನಚರಿಸುವ ಜನರಲ್ಲಿ
ಮಣೀದೀಪಕ ಮತಿ ಮನನಿಸಿ ಮೆರೆದರು ವರಮಂತ್ರಾಲಯದಲ್ಲಿ || 2 ||

ವಿಷಯದ ವಿಷದಿಂದುಸಿರಿಡುತಲಿ ಬಲುದೆಷೆಕೆಡುತಿಹ ಮನದಲ್ಲಿ
ಹೊಸ ಜ್ಯೋತಿಯ ಕರಮೆರೆಯಲು ಮೆರವರು ವರಮಂತ್ರಾಲಯದಲ್ಲಿ
ದಿನ ಸಂಸಾರದ ನೆನದರೆ ಗೋರದ ಘನರಥ ಎಡತಡೆದಲ್ಲಿ
ಮುನಿ ಮಹಾರಥಿ ಆಕ್ಷಣ ಬಂದೊಲಿವರು ವರಮಂತ್ರಾಲಯದಲ್ಲಿ || 3 ||

ಭುವಿಯೊಳು ಬಹುಪರಿ ಬಳಲುವ ಮನುಜನ ಭವಣೆಯ ಬಲುತಿಳಿದಿಲ್ಲಿ
ತವಕದಿ ಬಿಡಿಸಲು ಅವತರಿಸಿರುವರು ವರಮಂತ್ರಾಲಯದಲ್ಲಿ
ಕರೆದರೆ ಬರುವರು ಅರಗಳಿಗಿರದಲೆ ಕರೆಸಿದದಯಿಗಳೆಲ್ಲಾ
ಧರೆಯೊಳು ಗುರುಗಳ ಮೊರೆಯಿಡಲಾರದ ನರರೆ ಪಾಪಿಗಳೆಲ್ಲ || 4 ||

ಸುರತರು ಫಲಿಸಿದೆ ವರಕರು ದೊರೆತಿದೆ ವರಮಂತ್ರಾಲಯದಲ್ಲಿ
ತೆರೆವುದು ಮುಸುಕನು ಸ್ತಿರವಲ್ಲವು ತನ ಪರಸುಖ ಸಾಧನದಲ್ಲಿ
ಉರುತರ ತಪಸ್ಸು ಸಮಾಧಿಗಳಿಲ್ಲದೆ ದೊರೆವುದು ಸದ್ಗತಿಯಿಲ್ಲಿ
ಅರಿಯದೆ ವೇದ ಪುರಾಣ ಶಾಸ್ತ್ರವ ದೊರೆವುದು ಸನ್ಮತಿಯಿಲ್ಲಿ || 5 ||

ಮಾಧವ ಮತದಾಂಭೋನಿಧಿಚಂದ್ರರ ದಿಧೀತಿ ತೊಳಗುವುದಿಲ್ಲಿ
ವಾದಿಗಳೆಲ್ಲರ ಮೊದದಿ ಜಯಿಸಿದ ನಾದವು ಮೊಳಗುವದಿಲ್ಲಿ
ವೇದಾಂತದ ಪೂದೋಟದ ಪರಿಮಳ ಸಾಧಿಸಿ ದೊರೆತಿಹುದಿಲ್ಲಿ
ವೇದವಿಶಾರದೆ ಸ್ವಾದಿಸಿ ಸುಧೆಯ ವಿನೋದದಿ ರಮಿಸುವಳಿಲ್ಲಿ || 6 ||

ಪಾವನತರ ಮಹಯಾತ್ರಾ ತೀರ್ಥಿಗಳೋವಿಸಿ ನೆಲೆಸಿಹರಿಲ್ಲಿ
ಭೂವಲಯಕೆ ಸಲೆ ಆ ವೈಕುಂಠವು ಧಾವಿಸಿ ಬಂದಿಹುದಿಲ್ಲಿ
ಧನ್ವಂತರಿಗಳು ತನುದೋರಿರುವರು ಅನುದಿನ ಮನ ಒಲಿದಿಲ್ಲಿ
ಘನರೋಗಗಳಿಗೆ ಧನುವೇರಿಸಿ ಆ ಕ್ಷಣದೊಳು ಕಳೆದೋಯುವವಿಲ್ಲಿ || 7 ||

ಕುಷ್ಠಾದಿಗಳೆಂಭಷ್ಟಾದೆಶೆಗಳ ಶ್ರೇಷ್ಟಾಲಯದೊಳಗಿಲ್ಲಿ
ನಷ್ಟಾಗುತ ಸಕಲೇಷ್ಟವು ದೊರೆವುದು ಸೃಷ್ಟೀಷನ ಕೃಪೆಯಲ್ಲಿ
ಪ್ರೇತ ಪಿಶಾಚಗ್ರಹಾದಿಗಳೆಲ್ಲವು ಸೋತಿವೆ ಬಲಮುರಿದಿಲ್ಲಿ
ಆತರ ಮೊರೆಯೊಳು ಯಾತರ ಭಯವಿದೆ ಜ್ಯೋತಿರೆ ಪದಯುಗದಲ್ಲಿ || 8 ||

ಅಂಧರು ಗುರುಗಳ ಸುಂದರ ಮೂರ್ತಿಯ ಕಣ್ತೆರೆದು ನೋಡುವರಿಲ್ಲಿ
ವಂದ್ಯರು ಮಗುವಿನ ನಂದನದೊಳು ಆನಂದದಿ ಪಾಡುವರಿಲ್ಲಿ
ಜನುಮದ ಮೂಕರು ಚಿನ್ಮಯ ಮೂರ್ತಿಯ ವಿನುತದಿ ಕೀರ್ತಿಪರಿಲ್ಲಿ
ಘನಮಹಬದಿರರು ಮನದಣಿ ಕೇಳುತ ಮುನಿಗಳ ಪ್ರಾರ್ಥಿಪರಿಲ್ಲಿ || 9 ||

ಯಂತರ ಗುರುಗಳ ತಂತರನಂತಸ್ವತಂತ್ರವು ರಾಜಿಪುದಿಲ್ಲಿ
ಅಂತರ ಹೊಳೆ ಗುರುವಂತರ ಗಾನ ನಿರಂತರ ಸುಖವಿಹುದಿಲ್ಲಿ
ವ್ಯಂಗಕೆ ಸಂಗವು ಭಂಗಕೆ ಸಿಂಗರ ಕಂಗೆಡೆ ಮಂಗಳವಿಲ್ಲಿ
ಕಂಗೊಳಿಪುದು ಸುತರಂಗಿಣಿ ತೀರದ ಪುಂಗವರಾಲಯದಲ್ಲಿ || 10 ||

ಭವ ಸಾಗರವನು ದಾಟಿಸೆ ಬಲು ಅನುಭವಿಕರು ನಾವಿಕರಿಲ್ಲಿ
ತವಕದಿ ನಿಂದಿರೆ ಸವಿಯುವದೇತಕೆ ಭುವಿಯೊಳು ಬಹುಪರಿಯಿಲ್ಲಿ
ಸಂತತಿ ಸಂಪದ ಆಯುರರೋಗ್ಯವು ನಂದದಿ ದೊರೆಯುವುದಿಲ್ಲಿ
ಚಿಂತಿಪುದೇತಕೆ ಭ್ರಾಂತಿಯೊಳೆಲ್ಲರು ಪಂತದಿ ಗುರುನಿಂತಲ್ಲಿ || 11 ||

ರಾಜರ ರಾಜರ ಗುರುಮಹರಾಜರ ದೇಹವ ಬಣ್ಣಿಪುದೆಂತು
ರಾಜಿಪ ಶ್ರೀಹರಿ ಪಾದ ಸರೋಜವ ಪೂಜಿಪ ಸಂಪದರಿಂತು
ಅನಗರು ಇವರಾ ಘನತೆಯ ನೆಲೆಯದು ಮನುಜರಿಗರಿಯುವದೆಂತು
ಘನವ್ಯಾಪಕ ಜಪ ಜನಕ ಜನಾರ್ದನ ಅಣಿಯಾಗಿರೆ ಬಲುನಿಂತು || 12 ||

ತುಂಗಾ ತೀರ ವಿರಾಜರ ಕೀರ್ತಿಯು ಬಂಗಾರದ ಹೊಳೆಯಲ್ಲಿ
ಶೃಂಗಾರದಿ ಹರಿ ಪೊಂಗೊಳಲೂದುತ ಕಂಗೋಚರಿಸುವನಿಲ್ಲಿ
ಅನಿಮಿಷರೆಲ್ಲರು ಮುನಿಕುಲರೊಂದಿಗೆ ಕುಣಿಯುವರನುನಯದಿಂದಾ
ವನಗೋಪಾಲನ ಘನತೆಯ ಕೀರ್ತಿಸಿ ವಿನುತದಿ ಸಂಭ್ರಮದಿಂದಾ || 13 ||

ಭೂಸುರರೆಲ್ಲರು ಶ್ರೀಷನ ಗುಣಗಳ ಸಾಸಿರ ನಾಮಗಳಿಂದಾ
ಕೇಶವನೊಲಿದನ ತೋಷದಿ ತುತಿಪರು ಸೂಸುವ ಭಾಷ್ಪಗಳಿಂದಾ
ಬೃಂದಾವನ ಗೋವಿಂದನು ಗುರುಗಳ ವೃಂದಾವನದೊಳಗಿಂದು
ಮುಂದೋರದ ಭವ ಬಂದದಿ ಸಿಲುಕಿದ ವೃಂದವ ಪೊರೆಯುವನಿಂದು || 14 ||

ಸುಂದರ ಗುಡಿ ಶೃಂಗಾರದಿ ಶೋಭಿಪ ಚಂದದಿ ಮಂಟಪದಲ್ಲಿ
ವಂದಿತ ಗುರು ವೃಂದಾರಕರೆಸವರು ಕುಂದದ ಕಾಂತಿಯೊಳಿಲ್ಲಿ
ಮುತ್ತಿನ ಹಾರವು ಕಸ್ತೂರಿ ತಿಲಕವು ರತ್ನದಪದಕಗಳಿಂದಾ
ಚಿತ್ತದ ಭ್ರಾಂತಿಯನುತ್ತರಿಪವು ಪುರುಷೋತ್ತಮ ಗಾಯನದಿಂದಾ || 15 ||

ದ್ವಾದಶನಾಮವು ಮೋದದಿ ಗುರುಗಳ ಸಾದೃಷ ಸದ್ಗುರುವೆಂದು
ಭೂದಿವಿಜರಗನುವಾಧಿಸಿ ತೋರ್ಪುದು ಶ್ರೀಧರ ಸಂಪದರೆಂದು
ದಂಡ ಕಮಂಡಲ ಕೊಂಡಿಹ ವಸನದಿ ಮಂಡಿತ ಗುರುವರರಿಂದು
ಪಂಡರಿನಾಥನ ಕಂಡಿತ ಪ್ರೀಯರು ದಂಡ ಪ್ರಣಾಮಗಳಿಂದು || 16 ||

ಎಳೆತುಳಸಿಯ ವನಮಾಲೆಯ ಕೊರಳೊಲು ವಿಲಸಿತ ಕುಸುಮಗಳಿಂದಾ
ಕೊಳಲುದೂವ ಹರಿ ಕಳೆಯನು ತೋರ್ಪುದು ಮೊಳಗುವ ವಾದ್ಯಗಳಿಂದಾ
ರಥವೇರಿದ ಗುರು ಪತದೊಳು ಸಾಗಿರೆ ಪೃಥಿವಿಯು ಧಿಮಿಧಿಮಿಕೆಂದು
ರಥಿಕರ ಡಂಗುರ ನಾದನಿನಾದದಿ ಪ್ರತಿಧ್ವನಿ ಕೊಡುತಿಹರಿಂದು || 17 ||

ಭುವಿಯೊಳು ಮೊಳಗುವ ಜಯಬೇರಿಗೆ ಆ ದಿವಿಜರು ಸಂಭ್ರಮದಿಂದಾ
ಜವದೊಳು ಪೂಮಳೆ ಗರೆವರು ಪೋಷಿಸಿ ದಿನ ದುಂಧುಭಿಧ್ವನಿಯಿಂದಾ
ವರಮಂತ್ರಾಲಯ ಗುರು ಸಮ್ರಾಟರು ಮೆರೆವರು ವೈಭವದಿಂದಾ
ಗುರು ಮಧ್ವೇಶನ ಹಿರಿಯ ಪತಾಕೆಯ ತೆರದುದು ಬಹು ಸಿರಿಯಿಂದಾ || 18 ||

ಹರಿಯನು ತೋರಿಸಿ ಗುರುಸಂದರ್ಶನ ಉರುತರ ಪುಣ್ಯವದಿಂದು
ಗುರು ಸಂಕೀರ್ತನೆ ಸಿರಿಸಂಪದದೊಳು ನಿರುತದಿ ಪಾಲಿಪುದೆಂದು
ಗುರು ಪಾದೋದಕ ಪೊರೆವುದು ಭಕ್ತರ ಧುರಿತೊವ್ಗವಕಳೆದಿಂದು
ಗುರುಸೇವೆಯು ವರಪದವಿಯ ಮೆರೆವುದು ಅರಿವುದು ಸತ್ಯವಿದೆಂದು || 19||

ಗುರುಮಹರಾಜರೆ ವರ ಮುನಿತೇಜರೆ ಎರಗುವೆ ನಿಮ್ಮಡಿಗಿಂದು
ಘನಸಂಸಾರದೊಳಿರೆ ತರಗಾದೆನು ಪೊರೆವುದು ಕರುಣದೊಳಿಂದು
ಘನಭವರೋಗದಿ ಅನುಭವಭೋಗದಿ ತನುಮನ ತಾಪದಿ ನೊಂದು
ದಿನದಿನ ಕೊರಗಿದೆ ಮನದೊಳು ಮರುಗಿದೆ ಕನಿಕರ ತೋರುವುದಿಂದು || 20 ||

ಹಸು ತೃಷೆ ವಿಷಯದಿ ವ್ಯಸನದಿ ಬಹುಪರ ವಶನಾದೆನು ಸೆರೆಗೊಂಡು
ಬಿಸಜಾಕ್ಷನ ಪದ ತುಸುಸಹ ನೆನಯದೆ ಪಶು ಜೀವನ ಕೈ ಕೊಂಡು
ಶಿಶುವೆಂದರಿಯುತ ಶಶಿ ಹಾಸದಿ ನರ ಪಶು ಮಹಪಾಪಿಯನಿಂದು
ಅಸದಳ ಭಕುತಿಯೊಳೆಸೆಯುವ ಮತಿಮನನಿಸಿ ಸೆಲೆ ಪೊರುಯುವದಿಂದು || 21 ||

ಮೀಸಲು ಮುಡುಪಿದು ಸೂಸಿತು ಹೃದಯದಿ ಭಾವಿಸಿ ಗುರುಪದಕೆಂದು
ಪೂಸಿದ ಪರಿಮಳ ವಾಸಿಸೆ ಬಲು ಸುವಿಕಾಸಿತ ಹಾರವಿದೆಂದು
ಗುರುಪದ ಸೇವಿಸಿ ಹರುಷದಿ ಭಾವಿಸಿ ಗುರುಪದ ಹಾರವನಿಂದು
ಇರಿಸಿದೆ ಪದದೊಳ್ ಹರಿ ವಿಠ್ಠಲೇಶನೆ ನಿರುತದಿ ಪಾಲಿಪುದೆಂದು || 22 ||

madhwamrutha

Tenets of Madhwa Shastra

You may also like...

1 Response

  1. venkateh r. koujalgi says:

    nice attempt by the concerend people helps senior citizens to keep engaed withlatest information and activies

Leave a Reply

Your email address will not be published. Required fields are marked *