Sri Gopaladasara Charitre Pada – ಶ್ರೀ ಗೋಪಾಲದಾಸರ ಚರಿತ್ರೆ ಪದ

ಶ್ರೀಗೋಪಾಲದಾಸರ ಅನುಜರೂ, ಶಿಷ್ಯರೂ, ಅಪರೋಕ್ಷಜ್ಞಾನಿಗಳೂ ಆದ
ಶ್ರೀ ತಂದೆಗೋಪಾಲವಿಠಲದಾಸಾರ್ಯ (ರಂಗಪ್ಪ ದಾಸರು) ವಿರಚಿತ

ಶ್ರೀ ಗೋಪಾಲದಾಸರ ಚರಿತ್ರೆ ಪದ

ರಾಗ ಆನಂದಭೈರವಿ                ಆದಿತಾಳ

ಭಜಿಸಿ ಬದುಕಿರೊ ಅಜನಪಿತ ಶ್ರೀವಿಜಯವಿಟ್ಠಲರಾಯನಾ ।
ಭಜನಿ ಮಾಡುವ ವಿಜಯರಾಯರೆ ನಿಜಗುರುಗಳೆಂದೆನಿಪನಾ॥ಪ॥

ಮೂಲ ಪೇಳ್ವೆ ವಿಶಾಲ ಮಹಿಮ ಸುಶೀಲ ವಿಜಯರಾಯರ ।
ಕಾಲಕಾಲಕೆ ಸ್ಮರಿಪ ಶ್ರೀಗೋಪಾಲದಾಸರಾಯರಾ ॥ 1 ॥

ದಧಿಪಾಷಾಣದಧಿಪನೆನಿಸುವ ಮುದಗಲಾಖ್ಯ ಪುತ್ರನಾ ।
ಉದರದಲಿ ಉದುಭವಿಸಿದರು ನಾಲ್ವರದರೊಳಗೆ ಬುಧವರ್ಯನಾ॥ 2 ॥

ಪುಟ್ಟಿದಾಗಲೆ ಪಿತ ಮುರಾರಿಯ ಶಿಷ್ಟ ಶಿಶುವೆಂದೆನುತಲಿ ।
ಇಟ್ಟ ಈ ವಸುಧಿಯೊಳು ಪೆಸರನು ಧಿಟ್ಟ ಭಾಗಣ್ಣನೆನುತಲಿ ॥ 3 ॥

ಪಂಚವತ್ಸರ ಬರಲು ಮನೆಯೊಳು ಸಂಚಿತದ ಸಂಪತ್ತನು ।
ಪಂಚಬಾಣನ ಪಿತನ ಆಜ್ಞದಿ ಕೊಂಚವಾಗೆ ವೆಂಕಮ್ಮನು ॥ 4 ॥

ವೇಂಕಟರಮಣನ್ನ ಸ್ಮರಿಸುತ ಮಂಕುಮಗುಗಳ ಸಹಿತದಿ ।
ಸಂಕಟಾಬಡುತಲ್ಲೇ ನಿಂತರಾ ಸುಂಕಪುರದಾ ಸ್ಥಳದಲಿ ॥ 5 ॥

ಉದರಗೋಸುವಾಗಿ ಮತ್ತೆ ಸದನಗಳು ಬಲು ತಿರುಗುತಾ ।
ವಿಧಿಲಿಖಿತ ತಪ್ಪದುಯೆನುತಾ ಕೃಷಿ ಅದರ ವ್ಯಾಪಾರ ನಡಿಸುತಾ ॥ 6 ॥

ಏಳು ವರ್ಷವು ಸಾಗಿಸಿ ಶ್ರಮ ತಾಳದಲೆ ವಟ ವೃಕ್ಷದಾ ।
ಮೂಲದಲಿ ಮಲಗಿರಲು ದೇಹದ ಮ್ಯಾಲೆ ಸರ್ಪನಂದದಿ ॥ 7 ॥

ಆಡುತಿರಲದು ಕಂಡು ಮಕ್ಕಳು ಓಡಿ ಪೇಳ್ದರು ಜನನಿಗೆ ।
ನೋಡಬಂದರು ಜನನಿ ಜನರು ಕೊಂಡಾಡಿದರು ಈ ಮಹಿಮಿಗೆ ॥ 8 ॥

ವೃಕ್ಷವೇರಲು ಸರ್ಪ ಚಿಂತಿಸಿ ರಕ್ಷಕತ್ವವು ಇವರನೆ ।
ಲಕ್ಷ್ಮಿರಮಣನೆ ರಕ್ಷಿಸುವನೆಂದೀಕ್ಷಿಸಿ ಉತ್ತನೂರಿಗೆ ॥ 9 ॥

ಬಂದು ದೇವರ ಗುಡಿಪ್ರವೇಶಿಸಿ ನಿಂದು ನಲಿನಲಿದಾಡುತಾ ।
ಮಂದಿಗಳು ನೋಡಲ್ಕೆ ಮೌನದಿ ಮಂದಮತಿಯಂತೆ ತೋರುತಾ ॥ 10 ॥

ನಿರುತ ಸೇವೆಯ ಮಾಡೆ ಪುರಜನ ಹರಿಯ ಮಂದಿರ ದ್ವಾರವ ।
ಭರದಿ ಬಂಧಿಸಿ ತೆರಳಲಾಕ್ಷಣ ಕರವ ಬಾರಿಸಿ ತುತಿಸುವಾ ॥ 11 ॥

ವೇಣುಗಾಯನಪ್ರಿಯನು ಎದುರಿಲಿ ಕುಣಿವ ನೂಪುರ ಶಬ್ದವು ।
ಮನಿಗಳಲ್ಲಿಹ ಮನುಜರಾಲಿಸೆ ಮನಕೆ ಕೇವಲ ಮೋದವು ॥ 12 ॥

ಮೌನ ವ್ರತವನು ಮಾಡುತಿರುವ ಮನುಜನಾ ಮಾತಾಳ್ಪೆನೊ ।
ಏನಿದಚ್ಚರವೆನುತ ಬಾಧಿಸೆ ನಾನಾ ಕ್ಲೇಶವ ಬಟ್ಟನು ॥ 13 ॥

ಶೈವ ಪಣವನ್ನು ಮಾಡಿ ಕೇಳುತ ಇವರ ಜಯಪತ್ರ ಕೇಳಿದಾ ।
ತವಕ ಲಿಖಿಸಿ ಕೊಡೆನಲು ಪ್ರಾರ್ಥಿಸೆ ಕವನ ಪೇಳಲು ತೆರಳಿದಾ ॥ 14 ॥

ಸುತರ ಸ್ವಸ್ಥಿಯಗೋಸುಗದಿ ಭೂಪತಿಯ ಸೇವೆಯೊಳಿಟ್ಟರೆ ।
ಚತುರದಲಿ ಚೋರತ್ವ ಕಲ್ಪಿಸಿ ಅತಿದುರುಳ ಬಾಧಿಸುತಿರೆ ॥ 15 ॥

ಹರಿಯ ಧ್ಯಾನದೊಳಿರಲು ತರುಳರ ಘೋರ ಬಾಧೆಯ ತಿಳಿದನು ।
ಭರದಿ ಇಲ್ಲಿಂದತುಳ ಮಹಿಮೆಯ ತೋರಲವರನು ಬಿಟ್ಟನು ॥ 16 ॥

ಅಂದು ವೇಗದಿ ಮಂದಿರಕೆ ಬಂದು ನಿಂದು ಮಾತೆಯ ಕರೆದರು ।
ಮಂದಹಾಸದಿ ಅನುಜರೀರ್ವರು ಬಂದ ಸ್ಥಿತಿಯನು ಪೇಳಲು ॥ 17 ॥

ಇನಿತು ಪರಿದ್ವಯ ವತ್ಸರದೊಳು ಜನನಿಘರುಷವ ತೋರಿದಾ ।
ವನಜನಾಭನ ಕೃಪೆಯು ಇಂದಿನ ದಿನ ಪ್ರವೇಶೆಂದು ಪೇಳಿದಾ ॥ 18 ॥

ಹರಿಯ ಕರುಣ ಉಣಲಿ ಇಲ್ಲವು ನಿರುತ ಭಿಕ್ಷವ ಬೇಡಲು ।
ಎರಡು ವತ್ಸರ ಮೌನ ವೊಹಿಸಿ ಸರಸ ವಚನಗಳಾಡಲು ॥ 19 ॥

ಇಂದಿರೇಶನ ಕರುಣದಿಂದಲಿ ಬಂದ ಸಾಮಗ್ರಿ ನೋಡುತಾ ।
ಒಂದು ನಾಳಿಗೆ ಬೇಡವೆನ್ನಲು ಸುಂದರಾಂಗಿಯು ಲೋಭದಿ ॥ 20 ॥

ಗಡಿಗಿ ಏಳನು ತುಂಬಿ ಭೂಮಿಯೊಳಗಿಸೆರಡನೆ ದಿನದಲಿ ।
ನೋಡಿ ಕ್ರಿಮಿರಾಸಿಯನು ಇವರ ಬೇಡಿಕೊಂಡಳು ಕರುಣದಿ ॥ 21 ॥

ಮಂದಹಾಸದಿ ಮೂರು ಮ್ಯಾಲಕೆ ತಂದು ವಿಪ್ರರಿಗುಣಿಸಿದ ।
ಅಂದವಾದೀ ನಾಲ್ಕು ಘಟಗಳು ಮುಂದಕಿರಲೆಂದು ಪೇಳಿದಾ ॥ 22 ॥

ಭಾನು ಉದಯದಲೆದ್ದು ಶ್ರೀಹರಿ ಧ್ಯಾನದಲ್ಲಿರೆ ಜನರಿಗೆ ।
ಶ್ರೀನಿವಾಸನ ಕೃಪೆಯು ಪೇಳಿದ ನಾನಾ ಬಗೆ ಕೇಳ್ವವರಿಗೆ ॥ 23 ॥

ಈ ಮಹತ್ಮರ ಕೂಡ ವಿಪ್ರನು ಪ್ರೇಮವಚನಗಳಾಡುತಾ ।
ಯಾಮ ರಾತ್ರಿಯು ಗಮಿಸಿ ಪೋಗಲು ತಾ ಮನದಿ ಚಿಂತೆ ಮಾಡುತಾ ॥ 24 ॥

ಮರಳೆ ಸಂಧ್ಯಾವಂದನೆಯ ಮಾಡಿ ಕರದಿಂದರ್ಘ್ಯವ ಕೊಡುತಿರೆ ।
ತರಣಿಯನು ಅಸ್ತಾದ್ರಿಯಲಿ ಕಂಡು ಪರಮ ಹರುಷವ ಬಡುತಿರೆ ॥ 25 ॥

ಪರಿ ಪರೀ ಚರ್ಯ ಕಂಡು ರಾಜನು ದರ್ಶನಾದೀತೆಂದನು ।
ಹರಿಯ ಸನ್ನಿಧಿ ಕ್ಲುಪ್ತ ದ್ರವ್ಯವು ಕರಿಯ ಕುದರಿಯ ಕೊಡುವನು ॥ 26 ॥

ಈ ಪರಿಂದಲಿ ಪೇಳಿ ಹವಿಕನ ಭೂಪ ತಾ ಕಂಡಾಕ್ಷಣ ।
ಈ ಪೃಥಿವಿಪತಿ ಪದವು ನಿನಗೆ ತಪ್ಪದೆಂದ ಸುಲಕ್ಷಣಾ ॥ 27 ॥

ಧಾತ್ರಿಯೊಳು ಯಾದವಗಿರಿಯ ಸತ್ಪಾತ್ರ ತಿಮ್ಮಣ್ಣನೆಂಬನಾ ।
ತೀರ್ಥಯಾತ್ರೆಯ ನೆವನದಿಂದಾ ಕ್ಷೇತ್ರದಲಿ ವಾಸ ಮಾಡ್ದನಾ ॥ 28 ॥

ದೇಶದೇಶದ ಜನರುಗಳು ಬಂದು ವಾಸವಾಗಿ ಇಪ್ಪರೋ ।
ಶ್ರೀಶನಾಜ್ಞದಿ ಅವರವರ ಅಭಿಲಾಷೆ ಪೊರೈಸುತಿಪ್ಪರೊ ॥ 29 ॥

ವೇಂಕಟಕೃಷ್ಣೆಂದು ಪದಗಳಿಗಂಕಿತವು ನೀಡುತಲಿರೆ ।
ವೇಂಕಟೇಶನ ದಾಸವರ್ಯರು ಸೋಂಕಿ ವಿಜಯದಿಂ ಬರುತಿರೆ ॥30॥

ದಾಸವರ್ಯರು ಕಂಡು ಇವರಿಗುಪದೇಶವನು ಕೊಡಲಾಕ್ಷಣ ।
ಏಸು ಜನ್ಮದ ಸುಕೃತವೆನುತಲಿ ಲೇಸುಲೇಸೆಂದು ಮೆರದನಾ ॥ 31 ॥

ಉಡುಪಿಕೃಷ್ಣನ ದರುಶನಕ್ಕೆ ಆಜ್ಞಾ ಕೊಡಬೇಕೆನುತಲಿ ಕೇಳ್ದನು ।
ತಡವ್ಯಾಕೆನುತಲಿ ಹರಿಸ್ತುತಿಯ ಮಾಡಿ ಕೊಡುತ ಪೋಗಿಬಾರೆಂದನು ॥ 32 ॥

ಮಂಡಗದ್ದಿಯ ಭೀಮನೆಂಬುವ ಕಂಡು ಪೂಜಿಸಿ ಕಳುಹಿದ ।
ಗಂಡಿ ತ್ರಯದಲಿ ಸುಲಿಯೆ ಶಿಗದಿರೆ ದಂಡ ನಮಿಸಲುದ್ಧರಿಸಿದ ॥ 33 ॥

ಗೋಪಬಾಲಕನಾದ ಕೃಷ್ಣನ ವ್ಯಾಪಾರಂಗಳ ಸ್ಮರಿಸಿದಾ ।
ತಾ ಪುರಕೆ ಬರುತೋರ್ವ ಮನುಜಗಪಾರ ಭಾಗ್ಯವ ತೋರಿದಾ ॥ 34 ॥

ಉದರ ಶೂಲಿಯು ಬಾಧಿಸಲು ಶ್ರೀಪದುಮನಾಭನ ಷಡ್ರಸಾ ।
ಐದು ತಾಸಿಗೆ ಭುಂಜಿಸುವದೆನೆ ಮುದದಿ ನಡೆಸಿದ ಮಾನಿಸಾ ॥ 35 ॥

ವಿಜಯರಾಯರ ಪಾದ ನಿರುತದಿ ತ್ಯಜಿಸದಲೆ ಭಜಿಸುವರೊ ।
ವಿಜಯವಿಟ್ಠಲ ಪ್ರತಿಮೆಯನು ಕೊಡೆ ಭಜಿಸಿ ಪೂಜಿಸಿ ನಲಿವರೊ ॥ 36 ॥

ರಾಜವಳಿಯ ಗ್ರಾಮದಲಿ ಹರಿ ಪೂಜೆ ಮಾಡುತ ಗಿರಿಯಲಿ ।
ಮೂಜಗತ್ಪತಿ ರಥದೊಳಿಹನೆಂದು ನೈಜದಲಿ ಪೇಳುತ್ತಲಿ ॥ 37 ॥

ಕ್ಷಾಮ ಪರಿಹರ ಮಾಳ್ಪದೆನುತಲಿ ಗ್ರಾಮಿಕರು ಕರ ಮುಗಿಯಲು ।
ಆ ಮಹಾಮೂಢ ಮನುಜನಿಂದಲಿ ಕ್ಷೇಮವಾಗೆ ಕೊಂಡಾಡಲು ॥ 38 ॥

ಇವರ ಸ್ತುತಿಸಲು ಸೂತ ಶಾಖದಿ ಲವಣವಧಿಕ ಮಾಡಲು ।
ಲವಣಮಾನಿ ಜನಾರ್ದನನಿಗರ್ಪಿಸೆ ಸವಿದು ಭುಂಜಿಸಿ ಪೊಗಳಲು ॥ 39 ॥

ವೀರಗರ್ವದಲಿದ್ದ ಧೊರೆಗಳು ಘೋರಿಸಲು ತನ್ನನುಜರಾ ।
ವಾರಿ ನೋಟದಿ ನೋಡಿ ಪ್ರಾರ್ಥಿಸೆ ಸೇರಿದರು ಸ್ವಪುರವನಾ ॥ 40 ॥

ಪುನಹ ಕೃಷ್ಣನ ದರುಶನಕೆ ತಮ್ಮನುಜರಿಂದಲಿ ನಡೆದರು ।
ಜನನ ರಹಿತನು ವನುತೆ ಗರ್ಭದಿ ಜನಿಸೆ ದೃಶ್ಯನಾದನು ॥ 41 ॥

ಕ್ಷಿತಿಯೊಳಗೆ ತನಗಾದ ಅನುಭವ ಅತಿಶಯವನು ಪೇಳುತಾ ।
ರತಿಪತಿಪಿತನನ್ನು ತನ್ನಯ ಸುತನ ತೆರದಲಿ ಶೆಳವುತಾ ॥ 42 ॥

ಕ್ಷಿತಿಯೊಳಗೆ ಶ್ರೀರಂಗ ರಾಜನ ಅತಿ ವಿಭವ ನೋಡೂವರೊ ।
ಕೃತಿಪತಿ ನಿಂದಾ ಸ್ತುತಿಯ ಮಾಡುತತಿ ಮುದವ ಬಡುತಿಹರೊ ॥ 43 ॥

ಭೂಸುರರು ನದಿಯಲ್ಲಿ ಬರುತಿರೆ ಲೇಸು ಭೋಜನ ಬಯಸಲೂ ।
ದಾಸವರ್ಯರು ಅವರ ಮನೊ ಅಭಿಲಾಷೆಯಂತಲಿ ಸಲಿಸಲು ॥ 44 ॥

ವಸುಧಿಪತಿ ಕಂಚೀವರದರಾಜನ ವಸನಕೆ ದೀಪ ಸೋಂಕಲೂ ।
ಮುಸುಕು ತೊರದು ತುಂಗ ನದಿಯೊಳು ನಸುನಗುತ ಕರನೊರಸಲು ॥ 45 ॥

ಅರೆ ಮಾತುಗಳಾಡುತಲಿ ಹಯವೇರಿ ಬಂದನು ಬಳಿಯಲಿ ।
ಸೂರಿಜನ ಸಂಪ್ರೀಯನೆಂದು ಸಾರಿದನು ಸಜ್ಜನರಲಿ ॥ 46 ॥

ತರುಣಿ ಕ್ಷೀರವು ತಂದು ಕೊಡುತಿರೆ ಭರದಿ ಮರಳೊಳಗೆರದನು ।
ಮರಳಿ ಗುಡಿಯೊಳು ಕಂಡು ಬರುತಿರೆ ಕರುಣನಿಧಿಯನು ತೋರ್ದನು ॥ 47 ॥

ಕುಂಡಲಾಗಿರಿಯಲ್ಲಿ ವಿಪ್ರನು ಕಂಡು ವಿಜಯರಾಯರಾ ।
ದಂಡ ನಮನವ ಮಾಡಿ ಕೇಳ್ದನುದ್ದಂಡ ಕ್ಷಯರೋಗ ಕಳಿತ್ವರಾ ॥ 48 ॥

ಹರುಷದಿಂದುತ್ತನೂರು ಸೇರಲು ಪರಿಹರಾಗುವದೆಂದನೂ ।
ಬರಲು ಭಕ್ರಿಯ ವೊಳಗೆ ನಾಲ್ವತ್ತೊರುಷ ಆಯುವನಿತ್ತನು ॥ 49 ॥

ಸುಧೆ ಸುಪಾತ್ರದಿ ಪಿಡಿದ ಹರಿಯನು ಮುದದಿ ಸ್ಮರಿಸುತ ಕೊಟ್ಟನು ।
ಪದುಮನಾಭನು ಕೋಪದಿಂದಿರೆ ಶ್ರೀದಬಾರೆಂದು ಕರೆದನು ॥ 50 ॥

ಕರವೀರಪುರನಿಲಯ ಲಕುಮಿಯ ಪರಮ ಹರುಷದಿ ತುತಿಸಿದಾ ।
ಶರಣರಿಗೆ ಆ ಪದವನೊದಗಲು ಗುರುದಯದಿ ಪರಿಹರಿಸಿದಾ ॥ 51 ॥

ಮಂದಹಾಸದಿ ರಾಘವೇಂದ್ರರ ವೃಂದಾವನಕಭಿನಮಿಸಿದಾ ।
ಮುಂದೆ ನಡೆವ ವಿಚಿತ್ರಚರ್ಯಾನಂದದಲಿ ಸಂಸ್ತುತಿಸಿದಾ ॥ 52 ॥

ಅನುಜ ಹರಿಯನು ಕಾಣದಲೆ ತನ ಮನದಿ ಸ್ಮರಿಸುತ ನಿಲ್ಲಲು ।
ಕನಕಗಿರೀಶನ ಪ್ರಾರ್ಥಿಸುತ ಶ್ರೀವನಿತೆಯರಸನ ತೋರಲು ॥ 53 ॥

ತೇರಿನುತ್ಸಹ ನೋಡಿ ಹರುಷದಿ ಬಾರೊ ಮನಕೆಂದು ಸ್ತುತಿಸಿದ ।
ಪುರಕೆ ಬರುವ ಕಾಲದಲಿ ಹರಿ ಕರುಣವಿರಲೆಂದು ಪೇಳಿದಾ ॥ 54 ॥

ಪ್ರಾಣಸಖಗಪಮೃತ್ಯು ವೊದಗಿರೆ ವೇಣುಗೋಪಾಲ ಕೃಷ್ಣನಾ ।
ನಾನಾ ಪರಿಯಲಿ ಪ್ರಾರ್ಥಿಸಿನ್ನು ಹಾನಿ ಹಿಂದಕೆ ಮಾಡ್ದನಾ ॥ 55 ॥

ದುರುಳ ಮಾಯ್ಗಳ ಪುರಕೆ ಪೋಗಿ ಹರಿಯೆ ಪರನೆಂದು ಪೊಗಳುವ ।
ಭರದಿ ಬಂದವರೆಲ್ಲ ವಾದಿಸೆ ಹರುಷದಿಂದಲಿ ಜೈಸುವಾ ॥ 56 ॥

ದ್ವಿಜನು ವಿಜಯರಾಯರನು ತನ್ನ ನಿಜಸ್ವರೂಪವ ಕೇಳ್ದನು ।
ಸುಜನ ಶಿರೋಮಣಿ ಮುಕ್ತಿಯಲಿ ಕಾಕ ನಿಜವೆನುತ ಸ್ತುತಿ ಮಾಡ್ದನು ॥ 57 ॥

ನುಡಿದ ವಚನವ ಕೇಳಿ ವಿಪ್ರನು ಮಿಡುಕಿದನು ಬಲು ಮನದಲಿ ।
ಸಡಗರದಿ ಗುರು ವಿಜಯರಾಯರು ದೃಢ ಪೇಳಿಹೆ ನಿಜವೆನುತಲಿ ॥ 58 ॥

ಭವ ವಿಮೋಚನ ಮಾಳ್ಪ ನದಿಯೊಳು ಅವಗಹನ ಸ್ನಾನ ಮಾಡುತಾ ।
ಪವನಪಿತ ಅಹೋಬಲ ನೃಸಿಂಹನ ಕವನರೂಪದಿ ಸ್ಮರಿಸುತ ॥ 59 ॥

ಹರುಷದಲಿ ಸತ್ಯಬೋಧರಾಯರ ದರುಶನಕೆ ಪೋಗಿ ನಿಲ್ಲಲು ।
ತ್ವರದಿ ಮೂವರು ಸ್ತುತಿಯ ಮಾಡೆನೆ ಸರಸದಿಂದಲಿ ಪಾಡಲು ॥ 60 ॥

ಭರದಿ ವೇಂಕಟನೃಸಿಂಹಾರ್ಯರು ಬರಲು ಚರಣಕೆ ನಮಿಸುತಾ ।
ಅರಸಿ ಆಜ್ಞವೆ ಮುಖ್ಯ ನಿಮಗೆಂದು ಸರಸ ವಚನಗಳಾಡುತಾ ॥ 61 ॥

ಬಂದ ಬಗಿಯನು ತಿಳಿದು ನಿಮಗಿಷ್ಟೊಂದು ಚಿಂತ್ಯಾಕೆಂದನು ।
ಮುಂದೆ ತರುಳನು ಮಾಳ್ಪ ಚರಿತೆಯ ಮಂದಹಾಸದಿ ಪೇಳ್ದನು ॥ 62 ॥

ಮಂಗಳಪ್ರದವಾದ ನಿವೃತ್ತಿಸಂಗಮದಿ ಸ್ನಾನ ಮಾಡಿದ ।
ಗಂಗೆ ಮೊದಲಾದಖಿಳ ನದಿಗುತ್ತುಂಗ ಸ್ಥಳಯೆಂದು ಪೇಳಿದ ॥ 63 ॥

ಮೋದದಲಿ ತತ್ವಸಾರ ಪದ ಸುಳಾದಿಗಳು ಉಗಭೋಗವಾ ।
ಬೋಧಪೂರ್ಣರ ಶಾಸ್ತ್ರಸಮ್ಮತವಾದ ಕವನವ ಪೇಳುವಾ ॥ 64 ॥

ತನಯ ಅನುಜರ ಧನದಗೋಸುಗ ವಿನಯದಿಂದಲಿ ಕಳುಹಿದಾ ।
ಅನುಜನೋರ್ವಗೆ ಮುಂದಿನಾ ಸ್ಥಿತಿ ಕನಸಿನಂದದಿ ಪೇಳಿದಾ ॥ 65 ॥

ಸಣ್ಣವರ ಉದುಸಾಗಿ ಶ್ರೀಹರಿಯನ್ನು ಬಿನ್ನೈಸೀದನೂ ।
ಎನ್ನ ಸ್ವಾಮಿಯ ಮಹಿಮೆ ಧರೆಯೊಳಗಿನ್ನೂರೊರುಷೆಂದು ಪೇಳ್ದನು ॥ 66 ॥

ಹಿಂದೆ ಅನುಭವ ಜನ್ಮ ಚತುರ್ದಶ ಇಂದು ಈ ಜನುಮೆಂದನು ।
ಮುಂದೆರಡು ಜನ್ಮದ ಸುಚರಿಯಾನಂದದಲಿ ಕೇಳೆಂದನು ॥ 67 ॥

ಕ್ಷಿತಿಯೊಳಗೆ ಗುರುವ್ಯಾಸತತ್ವಜ್ಞರ ಸುತನೆನಿಸಿ ಸಚ್ಛಾಸ್ತ್ರವಾ ।
ಪ್ರತಿದಿನದಿ ಪ್ರವಚನ ಮಾಡುತ ಹುತಭುಜನ ಮುದ ಬಡಿಸುವಾ ॥ 68 ॥

ಎನ್ನ ಸ್ಥಾನಕೆ ಸೇರುವೆಯೋ ನೀ ನಿನ್ನ ವಂಶವು ಎನ್ನದು ।
ನಿನ್ನ ವಂಶದಿ ಘನ್ನನೆನಿಸುವೆ ಇನ್ನು ಸಂಶಯ ಸಲ್ಲದು ॥ 69 ॥

ಅನುಜ ಕೇಳ ಪಾಚಕನು ಜಲಧರ ಗಣಿಕಜ್ಞಾನಿ ಚಿಕಿತ್ಸಕಾ ।
ಮುನಿಯ ಪ್ರಮುಖರು ನಿನ್ನ ವಂಶದಿ ಜನಿಸಲು ಘನ ಬಾಲಕಾ ॥ 70 ॥

ಮಾತೃಗರ್ಭದೊಳಿರಲು ಮೃಣ್ಮಯ ಪಾತ್ರಿಯಲಿ ಜಲಪಾನವ ।
ಧಾತ್ರಿಯೊಳು ಇಚ್ಛೈಸುವವಳಾ ಪುತ್ರ ಭಾವವನೈದುವಾ ॥ 71 ॥

ಪುಟ್ಟಿ ದ್ವಾದಶ ವತ್ಸರದೊಳುತ್ಕೃಷ್ಟ ಮಹದಾರಿದ್ರವಾ ।
ಅಟ್ಟುಳಿಗೆ ಬಾಯ್ಬಿಡುವ ಜನಕನ ಕಷ್ಟ ಪರಿಹರ ಮಾಡುವಾ ॥ 72 ॥

ಊರ್ವಿಯೊಳು ನಾನಿಟ್ಟ ನಾಲಕು ಉರ್ವರಿತ ಭಾಂಡಗಳನು ।
ಗುರ್ವನುಗ್ರಹದಿಂದ ತೆಗೆದು ಸರ್ವರಿಗೆ ಸುಖ ಕೊಡುವನು ॥ 73 ॥

ಅವನೆ ಧನ್ಯನು ಎನ್ನ ಧನ ತೆಗದವನೆ ವೆಚ್ಚ ಮಾಳ್ಪನು ।
ಅವನೆ ಎನ್ನಸ್ಥಿಗಳನೊಯಿದು ದೇವನದಿಗರ್ಪಿಸುವನು ॥ 74 ॥

ಎಷ್ಟು ಪೇಳಲಿ ಎನ್ನ ವಂಶದಿ ಪುಟ್ಟಿದವರಿಗೆ ಪೇಳ್ವದು ।
ಧಿಟ್ಟ ಗುರುಗಳು ಕೊಟ್ಟ ಅಂಕಿತವಿಟ್ಟು ಪದಗಳ ಮಾಳ್ಪದು ॥ 75 ॥

ಭಕ್ತಿಯಲಿ ಇವಗ್ಯಾರು ಸರಿಯೆಂಬ ಉಕ್ತಿ ಗುರುಗಳ ವಾಕ್ಯವು ।
ಮುಕ್ತಿಸುಖ ವಿಚಿತ್ರ ಪೇಳ್ವೆ ವಿರಕ್ತರಾ ಯುಕ್ತಿ ದ್ವಾರವು ॥ 76 ॥

ಮಂದಮತಿ ನಾನಿವರ ಗುಣಗಳ ಒಂದನಾದರು ಅರಿಯೆನು ।
ಇಂದಿರೇಶನು ನುಡಿಸಿದದು ಆನಂದದಲಿ ಸಂಸ್ತುತಿಪೆನು ॥ 77 ॥

ಭಾ ಎನಲು ಭಕುತಿಯನು ಪುಟ್ಟಿಸಿ ಕಾಯಕ್ಲೇಶವ ಕಳವನೂ ।
ಎನಲು ಭವದೂರ ಮಾಳ್ಪನು ಣ್ಣಾ ಎನಲು ಮುಕ್ತಿ ಕೊಡುವನು॥78॥

ಇವರ ನಾಮ ಓಂಕಾರ ಪೂರ್ವಕ ಸ್ತವನ ಮಾಡಲು ಪವನನು ।
ತ್ರಿವಿಧ ಲಿಂಗವ ವಿರಜೆಯಲಿ ಕಳೆದವರ ಮುಕ್ತರೊಳಿಡುವನು ॥ 79 ॥

ಉದಯಕಾಲದಿ ಪದವ ಪಠಿಸಲು ಮದಡಗಾದರು ಜ್ಞಾನವ ।
ಒದಗುವದು ಸಂದೇಹವಿಲ್ಲದು ಪದುಮನಾಭನ ಕರುಣವಾ ॥ 80 ॥

ಏಕದಂತನೆ ಅಂಶದಲಿ ಭೂಲೋಕದಲಿ ಅವತರಿಸಿದಾ ।
ತಾ ಕಳೇವರವನ್ನು ಧರಿಸಿ ಶ್ರೀಕಳತ್ರನ ತುತಿಸಿದಾ ॥ 81 ॥

ಎರಡು ವಿಂಶತಿ ವರುಷಕೆ ಈ ಚರಿಯವ ಮಾಡಿದಾ ।
ಪರಮ ಹರುಷದಿ ಶ್ವಾಸ ಬಂಧಿಸಿ ಕರಣ ಮಾರ್ಗದಿ ತೆರಳಿದಾ ॥ 82 ॥

ಸೃಷ್ಟಿಯೊಳು ಚಿತ್ರಭಾನು ಪುಷ್ಯ ಕೃಷ್ಣಾಷ್ಟಮಿ ರವಿವಾರದಿ ।
ಬಿಟ್ಟು ದೇಹವ ತಂದೆಗೋಪಾಲವಿಟ್ಠಲನ ಪದಧ್ಯಾನದಿ ॥ 83 ॥

madhwamrutha

Tenets of Madhwa Shastra

You may also like...

Leave a Reply

Your email address will not be published. Required fields are marked *